ಕೈತುಂಬಾ ಕಾಸು ತರುವ 10 ಸಣ್ಣ ಬಿಸಿನೆಸ್ ಐಡಿಯಾಗಳು: ಕಡಿಮೆ ಬಂಡವಾಳ, ಗ್ಯಾರಂಟಿ ಲಾಭ

ಇವತ್ತಿನ ದಿನಗಳಲ್ಲಿ ಸ್ವಂತ ಉದ್ಯೋಗ ಮಾಡಬೇಕು ಅಂದುಕೊಳ್ಳುವವರ ಸಂಖ್ಯೆ ದೊಡ್ಡದಿದೆ. ಆದರೆ ಎಲ್ಲರ ಹತ್ತಿರವೂ ಲಕ್ಷ ಲಕ್ಷ ಬಂಡವಾಳ ಇರುವುದಿಲ್ಲ. ಹಾಗಂತ ಬಿಸಿನೆಸ್ ಮಾಡೋಕೆ ಆಗಲ್ವಾ ಅಂದರೆ ಖಂಡಿತ ಇಲ್ಲ. ದೊಡ್ಡ ಹೂಡಿಕೆಗಿಂತ, ನಾವು ಆಯ್ಕೆ ಮಾಡಿಕೊಳ್ಳುವ ಜಾಗ ಮತ್ತು ಜನರ ಅಗತ್ಯವನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಸಣ್ಣ ಬಿಸಿನೆಸ್‌ನಿಂದಲೇ ದೊಡ್ಡ ಮಟ್ಟದ ಲಾಭ ಗಳಿಸಬಹುದು.


ಯಾರಾದರೂ, ಎಲ್ಲಿ ಬೇಕಾದರೂ ಸುಲಭವಾಗಿ ಶುರು ಮಾಡಬಹುದಾದ 10 ಸೂಪರ್ ಬಿಸಿನೆಸ್ ಐಡಿಯಾಗಳು ಇಲ್ಲಿವೆ:

EGG SHOP NEAR GYM

1ಜಿಮ್ ಪಕ್ಕದಲ್ಲೇ ಹೆಲ್ತಿ ಫುಡ್ ಕಾರ್ನರ್

ಇತ್ತೀಚಿನ ಯೂತ್ಸ್‌ಗೆ ಫಿಟ್ನೆಸ್ ಕ್ರೇಜ್ ಜಾಸ್ತಿ. ಜಿಮ್ ಮುಗಿಸಿ ಹೊರಗೆ ಬರುವವರಿಗೆ ತಕ್ಷಣ ಬೇಕಾಗುವುದು ಪ್ರೋಟೀನ್ ಆಹಾರ. ಜಿಮ್‌ನ ಪಕ್ಕದಲ್ಲೇ ಬೇಯಿಸಿದ ಮೊಟ್ಟೆ, ಮೊಳಕೆ ಬರಿಸಿದ ಕಾಳುಗಳು, ಬಾಳೆಹಣ್ಣು, ಪ್ರೋಟೀನ್ ಶೇಕ್ ಮತ್ತು ಹಾಲಿನ ಸ್ಟಾಲ್ ಹಾಕಿದರೆ, ಜಿಮ್‌ಗೆ ಬರುವವರೆಲ್ಲಾ ನಿಮ್ಮ ಫಿಕ್ಸ್ಡ್ ಕಸ್ಟಮರ್ಸ್ ಆಗಿಬಿಡುತ್ತಾರೆ.


2. ಮಾರ್ಕೆಟ್ ಏರಿಯಾದಲ್ಲಿ ಪಾರ್ಕಿಂಗ್ ಜಾಗದ ಬಿಸಿನೆಸ್

ಇತ್ತೀಚಿನ ದಿನಗಳಲ್ಲಿ ಗಾಡಿ ತಗೊಂಡು ಹೊರಗೆ ಹೋದರೆ ಪಾರ್ಕಿಂಗ್ ಮಾಡುವುದೇ ದೊಡ್ಡ ತಲೆನೋವು. ನಿಮಗೇನಾದರೂ ಮಾರ್ಕೆಟ್, ಆಸ್ಪತ್ರೆ ಅಥವಾ ಕಮರ್ಷಿಯಲ್ ಸ್ಟ್ರೀಟ್‌ಗಳ ಹತ್ತಿರ ಖಾಲಿ ಜಾಗ ಇದ್ದರೆ, ಅಥವಾ ಬಾಡಿಗೆಗೆ ಸಿಕ್ಕರೆ ಅದನ್ನೇ ಪಾರ್ಕಿಂಗ್ ಸ್ಪೇಸ್ ಆಗಿ ಬದಲಾಯಿಸಿ. ಕೇವಲ ಒಬ್ಬಿಬ್ಬರು ವಾಚ್‌ಮ್ಯಾನ್ ಇಟ್ಟು ದಿನವಿಡೀ ಸುಲಭವಾಗಿ ಹಣ ಗಳಿಸಬಹುದು.


3. ಮಾಲ್‌ಗಳ ಎದುರು 'ಕ್ವಿಕ್' ಕಾರ್ ವಾಶ್

ಜನ ಮಾಲ್‌ಗಳಿಗೆ ಶಾಪಿಂಗ್ ಅಥವಾ ಸಿನಿಮಾ ನೋಡಲು ಹೋದಾಗ ಕನಿಷ್ಠ 2 ರಿಂದ 3 ಗಂಟೆ ಸಮಯ ಕಳೆಯುತ್ತಾರೆ. ಅದೇ ಮಾಲ್‌ಗಳ ಎದುರು ಅಥವಾ ಐಟಿ ಪಾರ್ಕ್‌ಗಳ ಹತ್ತಿರ ಸ್ಮಾರ್ಟ್ ಆಗಿ ಒಂದು ಕಾರ್ ವಾಶ್ ಸೆಂಟರ್ ಶುರು ಮಾಡಿದರೆ, ಜನ ಶಾಪಿಂಗ್ ಮುಗಿಸಿ ಬರುವಷ್ಟರಲ್ಲಿ ಅವರ ಕಾರು ಕ್ಲೀನ್ ಆಗಿರುತ್ತದೆ. ಸಮಯ ಉಳಿಯುವುದರಿಂದ ಜನರು ಇದಕ್ಕೆ ಖುಷಿಯಿಂದ ಹಣ ಕೊಡುತ್ತಾರೆ.


4. ಸಿಗ್ನಲ್ ಹಾಗೂ ಆರ್‌ಟಿಒ ಕಚೇರಿ ಬಳಿ ಹೆಲ್ಮೆಟ್ ಶಾಪ್

ಟ್ರಾಫಿಕ್ ರೂಲ್ಸ್ ಈಗ ತುಂಬಾ ಕಡಕ್ ಆಗಿದೆ, ಫೈನ್ ಕೂಡ ಜಾಸ್ತಿ ಇದೆ. ಹೀಗಾಗಿ ಹೆಲ್ಮೆಟ್ ಇಲ್ಲದೆ ಯಾರೂ ಗಾಡಿ ಓಡಿಸುವ ಹಾಗಿಲ್ಲ. ಟ್ರಾಫಿಕ್ ಸಿಗ್ನಲ್‌ಗಳ ಆಸುಪಾಸಿನಲ್ಲಿ ಅಥವಾ ಆರ್‌ಟಿಒ (RTO) ಆಫೀಸ್ ಹತ್ತಿರ ಒಂದು ಸಣ್ಣ ಹೆಲ್ಮೆಟ್ ಅಂಗಡಿ ಇಟ್ಟರೆ, ನಿಯಮಿತವಾಗಿ ಗ್ರಾಹಕರು ಸಿಗುತ್ತಾರೆ.


5. ಸಿಗ್ನಲ್‌ಗಳ ಬಳಿ ಎಳನೀರು ವ್ಯಾಪಾರ

ಬಿಸಿಲು ಇರಲಿ, ಇರದಿರಲಿ ಆರೋಗ್ಯದ ದೃಷ್ಟಿಯಿಂದ ಎಳನೀರಿಗೆ ಯಾವಾಗಲೂ ಡಿಮ್ಯಾಂಡ್ ಇದ್ದೇ ಇರುತ್ತದೆ. ಅದರಲ್ಲೂ ಟ್ರಾಫಿಕ್ ಸಿಗ್ನಲ್‌ಗಳು, ಬಸ್ ಸ್ಟ್ಯಾಂಡ್ ಅಥವಾ ದೊಡ್ಡ ಪಾರ್ಕ್‌ಗಳ ಹತ್ತಿರ ಎಳನೀರು ಸ್ಟಾಲ್ ಇಟ್ಟರೆ ವ್ಯಾಪಾರ ಜೋರಾಗಿ ಆಗುತ್ತದೆ. ಟ್ರಾಫಿಕ್‌ನಲ್ಲಿ ಸುಸ್ತಾಗಿ ನಿಲ್ಲುವ ಜನರಿಗೆ ನಿಮ್ಮ ಎಳನೀರು ಅಂಗಡಿ ತಕ್ಷಣ ಕಣ್ಣಿಗೆ ಬಿದ್ದರೆ ಸಾಕು, ದಿನಕ್ಕೆ ಒಳ್ಳೆ ಕಲೆಕ್ಷನ್ ಆಗುತ್ತೆ.


COCUNUTSHOP


6. ಸದಾ ಗಿಜಿಗುಡುವ ಟೀ-ಕಾಫಿ ಸ್ಟಾಲ್

ನಮ್ಮ ದೇಶದಲ್ಲಿ ಚಹಾಗೆ ಇರುವ ಕ್ರೇಜ್ ಮತ್ಯಾವುದಕ್ಕೂ ಇಲ್ಲ. ಆಫೀಸ್‌ಗಳು, ಕಾಲೇಜುಗಳು ಅಥವಾ ಮೆಟ್ರೋ ಸ್ಟೇಷನ್ ಹತ್ತಿರ ಒಂದು ಸಣ್ಣ ಟೀ ಮತ್ತು ಫಿಲ್ಟರ್ ಕಾಫಿ ಸ್ಟಾಲ್ ಇಟ್ಟರೆ ಸಾಕು. ಬಂಡವಾಳ ತುಂಬಾ ಕಡಿಮೆ, ಆದರೆ ಬೆಳಗ್ಗೆಯಿಂದ ಸಂಜೆಯವರೆಗೆ ನಿರಂತರವಾಗಿ ವ್ಯಾಪಾರ ನಡೆಯುತ್ತಲೇ ಇರುತ್ತದೆ.


7. ಮೊಬೈಲ್ ಆಕ್ಸೆಸರೀಸ್ ವ್ಯಾಪಾರ

ಪ್ರತಿಯೊಬ್ಬರ ಕೈಯಲ್ಲೂ ಈಗ ಮೊಬೈಲ್ ಇದೆ. ಫೋನ್ ತಗೊಂಡ ತಕ್ಷಣ ಅದಕ್ಕೆ ಕವರ್, ಟೆಂಪರ್ಡ್ ಗ್ಲಾಸ್, ಇಯರ್‌ಫೋನ್ ಬೇಕೇ ಬೇಕು. ಹೋಲ್‌ಸೇಲ್ ಮಾರ್ಕೆಟ್‌ನಿಂದ ಕಡಿಮೆ ಬೆಲೆಗೆ ಇವುಗಳನ್ನು ತಂದು, ಜನನಿಬಿಡ ರಸ್ತೆಗಳಲ್ಲಿ ಸಣ್ಣ ಶಾಪ್ ಓಪನ್ ಮಾಡಿದರೆ ಒಳ್ಳೆ ಲಾಭದ ಮಾರ್ಜಿನ್ ಸಿಗುತ್ತದೆ.


8. ಸಂಜೆ ಹೊತ್ತಿನ ಫಾಸ್ಟ್ ಫುಡ್ ಸೆಂಟರ್

ಸಂಜೆ ಆಗುತ್ತಿದ್ದಂತೆ ಜನರಿಗೆ ಏನಾದರೂ ಚಟಪಟ ಅಂತ ತಿನ್ನಬೇಕು ಅನಿಸುವುದು ಸಹಜ. ಬಿಸಿ ಬಿಸಿ ಗೋಬಿ ಮಂಚೂರಿ, ನೂಡಲ್ಸ್, ಸ್ಯಾಂಡ್‌ವಿಚ್ ಅಥವಾ ಚಾಟ್ಸ್ ಮಾಡುವ ಫಾಸ್ಟ್ ಫುಡ್ ಕಾರ್ನರ್‌ಗಳಿಗೆ ಸದಾ ಜನ ಇರುತ್ತಾರೆ. ರುಚಿ ಮತ್ತು ಸ್ವಚ್ಛತೆ ಕಾಪಾಡಿಕೊಂಡರೆ ಈ ಬಿಸಿನೆಸ್‌ನಲ್ಲಿ ಸೋಲೇ ಇಲ್ಲ.


9. ಫ್ರೆಶ್ ಜ್ಯೂಸ್ ಮತ್ತು ಮಿಲ್ಕ್‌ಶೇಕ್ ಸೆಂಟರ್

ಆರೋಗ್ಯದ ಕಡೆ ಗಮನ ಕೊಡುವವರು ಸಾಫ್ಟ್ ಡ್ರಿಂಕ್ಸ್ ಬಿಟ್ಟು ಫ್ರೆಶ್ ಜ್ಯೂಸ್ ಹುಡುಕುತ್ತಾರೆ. ಸ್ಕೂಲ್, ಕಾಲೇಜು ಅಥವಾ ಮಾರ್ಕೆಟ್ ಹತ್ತಿರ ಸೀಸನಲ್ ಹಣ್ಣುಗಳ ಜ್ಯೂಸ್ ಮತ್ತು ವೆರೈಟಿ ಮಿಲ್ಕ್‌ಶೇಕ್ ಅಂಗಡಿ ಇಟ್ಟರೆ ಕೈತುಂಬಾ ಕಾಸು ನೋಡಬಹುದು.


10. ಬೈಕ್ ಮತ್ತು ಕಾರ್ ಆಕ್ಸೆಸರೀಸ್ ಅಂಗಡಿ

ತಮ್ಮ ಗಾಡಿಯನ್ನು ಚಂದವಾಗಿ ಇಟ್ಟುಕೊಳ್ಳಬೇಕು ಅಂದುಕೊಳ್ಳುವವರು ತುಂಬಾ ಜನ ಇದ್ದಾರೆ. ಆಕರ್ಷಕ ಸೀಟ್ ಕವರ್‌ಗಳು, ಮೊಬೈಲ್ ಹೋಲ್ಡರ್ಸ್, ಕಾರ್ ಪರ್ಫ್ಯೂಮ್, ಕ್ರೇಜಿ ಎಲ್‌ಇಡಿ ಲೈಟ್‌ಗಳಂತಹ ಆಕ್ಸೆಸರೀಸ್ ಮಾರಾಟ ಮಾಡುವ ಅಂಗಡಿ ಇಟ್ಟರೆ ಗಾಡಿ ಪ್ರಿಯರು ಖಂಡಿತ ನಿಮ್ಮ ಅಂಗಡಿಗೆ ಹುಡುಕಿಕೊಂಡು ಬರುತ್ತಾರೆ.


ಕೊನೆಯದಾಗಿ ಒಂದು ಮಾತು:

ಯಾವುದೇ ಬಿಸಿನೆಸ್ ಸಣ್ಣದಾಗಿರಲಿ ಅಥವಾ ದೊಡ್ಡದಾಗಿರಲಿ, ನಾವು ಗ್ರಾಹಕರಿಗೆ ಕೊಡುವ ಮರ್ಯಾದೆ ಮತ್ತು ನಮ್ಮ ಕೆಲಸದ ಮೇಲಿರುವ ಪ್ರಾಮಾಣಿಕತೆ ನಮ್ಮನ್ನು ಕೈಹಿಡಿಯುತ್ತದೆ. ಆರಂಭದಲ್ಲಿ ಕಷ್ಟ ಅನಿಸಿದರೂ, ಸರಿಯಾದ ಜಾಗ ನೋಡಿ ಕಸ್ಟಮರ್ಸ್ ಮನಸ್ಸು ಗೆದ್ದರೆ, ಈ ಸಣ್ಣ ಉದ್ಯಮಗಳೇ ಮುಂದೆ ದೊಡ್ಡ ಬ್ರ್ಯಾಂಡ್ ಆಗಿ ಬೆಳೆಯುವುದರಲ್ಲಿ ಅನುಮಾನವಿಲ್ಲ